ಬಾಡೆ, ವಾಲ್ಸರ್ 1893-1960. ಜರ್ಮನಿ ಸಂಜಾತ ಅಮೆರಿಕನ್ ಖಗೋಳವಿಜ್ಞಾನಿ. ಜರ್ಮನಿಯ ವೆಸ್ಟ್‍ಫೇಲಿಯದ ಷ್ಯ್ರೋಟಿಂಗ್‍ಹೌಸೆನ್ನಿನಲ್ಲಿ ಜನನ (24 ಮಾರ್ಚ್ 1893). ಖಗೋಳವಿಜ್ಞಾನದಲ್ಲಿ ಹೆಚ್ಚಿನ ಅಭಿರುಚಿ ಆಸಕ್ತಿಗಳನ್ನು ಹೊಂದಿದ್ದ ಈತ ಗಾಟಿಂಗೆನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದು (1919) ಹನ್ನೊಂದು ವರ್ಷಗಳ ಕಾಲ ಹ್ಯಾಂಬರ್ಗ್ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡಿ ಅನಂತರ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ತೆರಳಿದ (1931). ಖಗೋಳವಿಜ್ಞಾನಕ್ಕೆ ಈತನ ಮಹತ್ತ್ವಪೂರ್ಣ ಕೊಡುಗೆಗಳು ಈತ ಅಮೆರಿಕದ ಮೌಂಟ್ ವಿಲ್ಸನ್ ಮತ್ತು ಪಾಲೊಮಾರ್ ವೇದಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಕಟವಾದವು.

ಈತನ ಮುಖ್ಯ ಕೊಡುಗೆಗಳೆಂದರೆ ಹಿಡಾಲ್ಗೊ (1920) ಮತ್ತು ಇಕಾರಸ್ (1948) ಕ್ಷುದ್ರಗ್ರಹಗಳ ಆವಿಷ್ಕಾರಗಳು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಲಾಸ್ ಏಂಜಲೀಸ್ ನಗರದಲ್ಲಿ ಉಂಟಾಗುತ್ತಿದ್ದ ಬ್ಲಾಕ್‍ಔಟ್ ಪರಿಸ್ಥಿತಿ ಈತನಿಗೆ ವರವಾಗಿ ಪರಿಣಮಿಸಿತು. ಆಗ ಈತ ಮೌಂಟ್ ವಿಲ್ಸನ್ ವೇದಶಾಲೆಯಿಂದ 100 ಇಂಚ್ ದೂರದರ್ಶಕದ ಮೂಲಕ ಆಂಡ್ರೊಮಿಡ ಬ್ರಹ್ಮಾಂಡವನ್ನು ವೀಕ್ಷಿಸಿ ಅದರ ನಕ್ಷತ್ರಗಳ ಬಗ್ಗೆ ವಿವರ ತಿಳಿದ. ಇದಕ್ಕೂ ಮೊದಲು ಖಗೋಳವಿಜ್ಞಾನಿ ಎಡ್ವಿನ್ ಹಬಲ್ (1889-1953) ಆ ಬ್ರಹ್ಮಾಂಡದ ಸುರುಳಿ ಬಾಹುಗಳಲ್ಲಿದ್ದ ಯಮಳಗಳನ್ನು ವೀಕ್ಷಿಸಿ ಅವನ್ನು ನೀಲಶ್ವೇತಗಳು ಎಂದು ಕರೆದಿದ್ದ. ಆದರೆ ಬಾಡೆ ನಡೆಸಿದ ವೀಕ್ಷಣೆಗಳಿಂದ ಅವು ರಕ್ತದೈತ್ಯಗಳು ಎಂಬುದು ಸ್ಥಿರಪಟ್ಟಿತು. ನಕ್ಷತ್ರಗಳ ರಚನೆ, ಉಗಮ ಇತಿಹಾಸಗಳ ಬಗ್ಗೆ ವಿವರವಾಗಿ ಅಧ್ಯಯನ ನಡೆಸಿದ ಬಾಡೆ ಬ್ರಹ್ಮಾಂಡದ ಹೊರವಲಯದಲ್ಲಿಯ ನೀಲನಕ್ಷತ್ರಗಳನ್ನು ನಕ್ಷತ್ರ ಸಮಷ್ಟಿ I (ಪಾಪ್ಯುಲೇಷನ್ II) ಎಂದೂ ಒಳ ವಲಯದ ಕೆಂಪು ನಕ್ಷತ್ರಗಳನ್ನು ನಕ್ಷತ್ರ ಸಮಷ್ಟಿ I I(ಪಾಪ್ಯುಲೇಷನ್ I I)ಎಂದೂ ವರ್ಗೀಕರಿಸಿದ.

ಎರಡನೆಯ ಮಹಾಯುದ್ಧ ಮುಗಿದ ಮೇಲೆ ಬಾಡೆ 200 ಇಂಚ್ ವ್ಯಾಸದ ದೂರದರ್ಶಕವನ್ನು ಬಳಸಿಕೊಂಡ. ನಕ್ಷತ್ರ ಸಮಷ್ಟಿ I ಮತ್ತು II ರಲ್ಲೂ ಸೀಫಾಯ್ಡ್ ಚಂಚಲತಾರೆಗಳು ಇರುವುದನ್ನು ಗುರುತಿಸಿದ. ಈ ತಾರೆಗಳ ಅವಧಿ ಮತ್ತು ಕೃತಿಗಳನ್ನು ಕುರಿತಂತೆ ಖಗೋಳವಿಜ್ಞಾನಿಗಳಾದ ಹಾರ್ಲೊ ಷಾಪ್ಲೀ (1885) ಮತ್ತು ಹೆನ್ರಿಟ ಲೆವಿಟ್ (1868-1921) ಎಂಬವರು ಸಮಷ್ಟಿ II ಕ್ಕೆ ಮಾತ್ರ ಸಂಬಂಧಿಸಿದಂತೆ ಅಧ್ಯಯನ ಮತ್ತು ಲೆಕ್ಕಾಚಾರ ನಡೆಸಿದರು. ಇದರಿಂದ ಗೋಳಾತ್ಮಕ ಪುಂಜಗಳಲ್ಲಿ ಹಾಗೂ ಮ್ಯಾಗೆಲ್ಯಾನಿಕ್ ಮೇಘಗಳಲ್ಲಿ ನಕ್ಷತ್ರಸಮಷ್ಟಿ II ತಾರೆಗಳು ಮಾತ್ರ ಇರಲು ಸಾಧ್ಯವೆಂಬುದು ತಿಳಿದುಬಂತು. ಈ ತಾರೆಗಳನ್ನು ಕುರಿತು ನಡೆಸಿದ ವೀಕ್ಷಣೆಗಳಿಂದ ಅವುಗಳ ದೂರಗಳ ಬಗ್ಗೆಯೂ ಕೆಲವಂಶಗಳು ಬೆಳಕಿಗೆ ಬಂದುವು. ನಕ್ಷತ್ರಗಳ ದೂರಗಳಿಗೆ ಸಂಬಂಧಿಸಿದಂತೆ ಬಾಡೆ ನಡೆಸಿದ ಲೆಕ್ಕಾಚಾರಗಳು ನಕ್ಷತ್ರಸಮಷ್ಟಿ I ರ ಸೀಫಾಯ್ಡ್‍ಗಳನ್ನು ಕುರಿತಂತೆ ಇದ್ದು. ತಾರೆಗಳ ಅವಧಿ-ಕಾಂತಿಗಳನ್ನು ತಿಳಿಸುವ ನೂತನ ರೇಖಾಚಿತ್ರವನ್ನು ಈತ ರೇಖಿಸಿದ (1952). ಅವಧಿಗೆ ಅನುಗುಣವಾಗಿ ಅವುಗಳ ಪ್ರಕಾಶವಿರುತ್ತದೆಂಬ ತತ್ತ್ವ ಆಧರಿಸಿ, ಹಬಲ್ ಅಂದುಕೊಂಡದ್ದಕ್ಕಿಂತಲೂ ಹೆಚ್ಚಿನ ದೂರದಲ್ಲಿ ಆಂಡ್ರೊಮಿಡ ಬ್ರಹ್ಮಾಂಡ ಇರಬೇಕು ಎಂದು ಬಾಡೆ ಲೆಕ್ಕ ಹಾಕಿದ. ಈ ಬ್ರಹ್ಮಾಂಡದ ದೂರ 2,400,000 ಜ್ಯೋತಿರ್ವರ್ಷಗಳು ಎಂಬುದು ಈಗಿನ ಮೌಲ್ಯ. ಇಡೀ ವಿಶ್ವದ ವ್ಯಾಕೋಚನೆಯಿಂದಾಗಿ ಆಂಡೊಮಿಡದ ಗಾತ್ರವೂ ಇಪ್ಪತ್ತು ಪಟ್ಟು ಹೆಚ್ಚಿದೆ ಎಂದು ತಿಳಿದಿದೆ.

ನಕ್ಷತ್ರಗಳಿಂದ ಹೊರಬರುವ ರೇಡಿಯೊ ವಿಕಿರಣವನ್ನು ಕುರಿತಂತೆ ಕಾರ್ಲ್ ಜ್ಯಾನ್ಸ್ಕಿ (1905 -50) ನಡೆಸಿದ ಪ್ರಯೋಗ, ಅಧ್ಯಯನಗಳಿಂದಾಗಿ ಸಿಗ್ನಸ್ ನಕ್ಷತ್ರ ಪುಂಜದಲ್ಲಿ ವಿಕೃತ ಬ್ರಹ್ಮಾಂಡ ಇರುವುದನ್ನು ಪತ್ತೆಮಾಡಿ ರೇಡಿಯೋ ವಿಕಿರಣಕ್ಕೆ ಇದೇ ಆಕರ ಎಂದು ಅಭಿಪ್ರಾಯಪಟ್ಟ. ಎರಡು ಬ್ರಹ್ಮಾಂಡಗಳು ಒಂದಕ್ಕೊಂದು ಡಿಕ್ಕಿಹೊಡೆದುದರ ಪರಿಣಾಮವಾಗಿ ಈ ಬ್ರಹ್ಮಾಂಡ ಆಗಿದೆ ಎಂದು ಮುಂದೆ ತಿಳಿದುಬಂತು. ಬ್ರಹ್ಮಾಂಡಗಳ ಸಂಘಟನೆಗಳನ್ನು ಕುರಿತಂತೆಯೂ ಬಾಡೆ ಅಧ್ಯಂiÀiನ ಮತ್ತು ವೀಕ್ಷಣೆ ನಡೆಸಿದ. ವಿಶ್ವದ ರೇಡಿಯೊ ಅನ್ವೇಷಣೆಗೆ ಕಾರಣರಾದವರ ಪೈಕಿ ಬಾಡೆ ಒಬ್ಬ. ಮೌಂಟ್ ವಿಲ್ಸನ್ ವೇದಶಾಲೆಯಲ್ಲಿ ಮಹತ್ತರ ವೀಕ್ಷಣೆಗಳನ್ನು ನಡೆಸಿದ ಬಾಡೆ 1858ರಲ್ಲಿ ಗಾಟಿಂಗೆನ್ನಿಗೆ ಹಿಂತಿರುಗಿ ಅಲ್ಲೇ ಕಾಲವಾದ.					
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ